ಬೆಂಗಳೂರು, ಸೆ 24: ಕನ್ನಡ ಭಾಷೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಕನ್ನಡ ಚರ್ಚಾ ಸ್ಪರ್ಧೆಗಳು ಪೂರಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಪ್ರತಿಪಾದಿಸಿದರು.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿಂದು ನಡೆದ ಕು. ವನಿತಾ ಸ್ಮಾರಕ 10ನೇ ರಾಜ್ಯಮಟ್ಟದ ಕನ್ನಡ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ವೈಚಾರಿಕತೆ ಜಾಗೃತಗೊಳಿಸುತ್ತವೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಇರುವಂತೆಯೇ ಚರ್ಚೆ, ಭಾಷಣ, ಗಾಯನ ಸೇರಿದಂತೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯ ಸಾಧಿಸಿದವರಿಗೆ ಕೂಡ ಮೀಸಲಾತಿ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಲ್ಲಿ ಚಿಂತನೆಯ ಗಣ ಮೈಗೂಡುತ್ತದೆ, ನಾಯಕತ್ವದ ಗುಣ ಬೆಳೆಯುತ್ತದೆ ಎಂದರು. ಅಗಲಿದ ಪುತ್ರಿಯ ಹೆಸರಿನಲ್ಲಿ ಚರ್ಚಾ ಸ್ಪರ್ಧೆ ನಡೆಸಿ ಇಂದಿನ ಚರ್ಚಾಪಟುಗಳಲ್ಲಿ ತಮ್ಮ ಮಗಳನ್ನು ಕಾಣುತ್ತಿರುವ ಹಿರಿಯ ವಕೀಲ ಮಲ್ಲೇಶಯ್ಯ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ನಿರ್ದೇಶಕ ಎಸ್.ಜಿ. ರವೀಂದ್ರ, ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರಮೋದ್ ಮುತಾಲಿಕ್ ಮೊದಲಾದವರು ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 80 ಕಾಲೇಜುಗಳ 164 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಪದವಿಪೂರ್ವ ವಿಭಾಗದ ಪಾರಿತೋಷಕವನ್ನು ರೂರಲ್ ಕಾಲೇಜು ಕನಕಪುರ ಹಾಗೂ ಪದವಿ ವಿಭಾಗದ ಪಾರಿತೋಷಕವನ್ನು ಸರ್ಕಾರಿ ಪದವಿ ಕಾಲೇಜು ವಿಜಯನಗರ ಬೆಂಗಳೂರು ಪಡೆದರು.
ನ್ಯಾಷನಲ್ ಎಜ್ಯುಕೇಷನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎ.ಎಚ್. ರಾಮರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಸದ್ಗುರು ಸಾಯಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಭಾಕರರೆಡ್ಡಿಯವರು, ಹಾಗು ನಮ್ಮ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮೌಳೇಶ್ ಅವರು, ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಎಂ.ಕೆ.ಶ್ರೀಧರ್ ಅವರು ಉಪಸ್ಥಿತರಿದ್ದರು.
No comments:
Post a Comment